Ad Widget

ಹಲ್ಲನ್ನು ಬಿಳುಪಾಗಿಡಲು ಅನುಸರಿಸಬೇಕಾದ ಸುರಕ್ಷಿತ ಕ್ರಮಗಳೇನು?

ಹೊಳೆಯುವ ಹಲ್ಲುಗಳಿಗಾಗಿ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಹಲ್ಲು ತಕ್ಷಣ ಬಿಳುಪಾಗಿಸಲು ಹಲವಾರು ಸುಲಭ ವಾಮ ಮಾರ್ಗಗಳನ್ನು ಯಾವುದೇ ವೈಜ್ಞಾನಿಕ ಪುರಾವೇ ಇಲ್ಲದೆ ಹತ್ತು ನಿಮಿಷಗಳಲ್ಲಿ ಹಲ್ಲು ಬಿಳಿಯಾಗುತ್ತದೆ ಎಂದೆಲ್ಲಾ ಜಾಹೀರಾತು ನೀಡಿ ದಾರಿ ತಪ್ಪಿಸುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ಇಂತಹಾ ದಿಢೀರ್ ಬಿಳುಪೀಕರಣದಿಂದಾಗುವ ಅಪಾಯದ ಅರಿವು ಇಲ್ಲದ ಜನರು ಹಲ್ಲು ಬಿಳುಪಾಗಿಸಲು ಸುಲಭವಾದ ಅವೈಜ್ಞಾನಿಕವಾದ ದಾರಿ ಹಿಡಿದು ಹಲ್ಲನ್ನು ಹಾಳು ಮಾಡಿಕೊಂಡ ನಿದರ್ಶನಗಳು ನಮ್ಮೆದುರಿಗೆ ಬಹಳಷ್ಟು ಇದೆ. ತಿಂಗಳಲ್ಲಿ ಒಂದೆರಡು ಮಂದಿಯಾದರೂ ಹಲ್ಲು ಬಿಳುಪು ಮಾಡಲು ಹೋಗಿ ದಂತ ಅತೀ ಸಂವೇದನೆಯ ತೊಂದರೆಗೆ ಸಿಲುಕಿ ದಂತ ವೈದ್ಯರು ಮೊರೆ ಹೋಗುವ ಘಟನೆಗಳು ನಡೆಯುತ್ತಲೇ ಇದೆ. ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ, ಈ ರೀತಿ ತೊಂದರೆಗೆ ಸಿಲುಕುವುದು ಬಹಳ ವಿಷಾದನೀಯ ಸಂಗತಿ. ಉಪ್ಪು ಮತ್ತು ಲಿಂಬೆಯ ಮಿಶ್ರಣದಿಂದ ಹಲ್ಲನ್ನು ಮೂರು ನಿಮಿಷಗಳ ಕಾಲ ಜೋರಾಗಿ ಉಜ್ಜಿರಿ. ನಿಮ್ಮ ಹಲ್ಲು ಹತ್ತು ನಿಮಿಷಗಳಲ್ಲಿ ಪಳ ಪಳ ಮಿಂಚುತ್ತದೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಲೇ ಇದೆ. ಇಂತಹಾ ಪ್ರಯೋಗದಿಂದ ಹಲ್ಲಿನ ಹೊರಭಾಗದ ರಕ್ಷಣಾ ಪದರವಾದ ಎನಾಮಲ್ ಪದರಕ್ಕೆ ಹಾನಿಯಾಗುತ್ತದೆ. ಹಲ್ಲಿನ ಎನಾಮಲ್‍ನಲ್ಲಿರುವ ಕ್ಯಾಲ್ಸಿಯಂ ಮತ್ತು ಫಾಸ್ಫರಸ್‍ಗಳನ್ನು ಲಿಂಬೆ ಹಣ್ಣಿನ ರಸದಲ್ಲಿರುವ ಸಿಟ್ರಿಕ್ ಆಸಿಡ್ ಎಂಬ ತೀಕ್ಷವಾದ ಆಮ್ಲ, ಕರಗಿಸಿ ಹಲ್ಲನ್ನು ಬಹಳ ಸೆನ್ಸಿಟಿವ್ ಆಗುವಂತೆ ಅಥವಾ ಅತೀ ಸಂವೇದನೆ ಉಂಟಾಗುವಂತೆ ಮಾಡುತ್ತದೆ. ಅದೇ ರೀತಿ ಉಪ್ಪಿನಲ್ಲಿ ಅಯೋಡಿನ್ ಇರುವುದರಿಂದ ಒಸಡಿನ ಮೇಲೆ ಅಡ್ಡ ಪರಿಣಾಮ ಬೀರಿ, ವಸಡಿನಲ್ಲಿ ರಕ್ತ ಒಸರುವುದು, ಅಥವಾ ಗುಳ್ಳೆ ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಉಪ್ಪಿನ ಕಣಗಳು ದೊಡ್ಡದಾಗಿದ್ದಲ್ಲಿ ವಸಡಿನ ಮೇಲೆ ಗಾಯಗಳಾಗುವ ಸಾಧ್ಯತೆ ಇರುತ್ತÀದೆ ಮತ್ತು ಹಲ್ಲುಗಳ ಮೇಲೆ ಗೀರು ಅಥವಾ ದೊರಗು ಉಂಟಾಗಬಹುದು. ಇನ್ನು ಕೆಲವೊಂದು ಜಾಲತಾಣಗಳಲ್ಲಿ ಕೆಲವೊಂದು ಆಮ್ಲೀಯ ದ್ರಾವÀಣಗಳ ಮಿಶ್ರಣವನ್ನು ಬಳಸುವ ಉಚಿತ ಸಲಹೆ ನೀಡುತ್ತಾರೆ. ಅವೆಲ್ಲವೂ ಹಲ್ಲಿಗೆ ಹಾನಿಕರ. ಕ್ಷಣಿಕವಾಗಿ ಹಲ್ಲನ್ನು ತಕ್ಷಣ ಬಿಳುಪಾಗಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ ಈ ರೀತಿ ಹಲ್ಲಿನ ಎನಾಮಾಲ್ ಪದರವನ್ನು ಕರಗಿಸುವ ಯಾವುದೇ ಮಿಶ್ರಣವನ್ನು ಬಳಸಬಾರದು. ಹಲ್ಲಿನ ಬಣ್ಣವನ್ನು ಆಂತರಿಕ ಮತ್ತು ಬಾಹ್ಯ ಎಂದು ವಿಂಗಡಿಸಲಾಗಿದೆ. ಹಲ್ಲಿನ ಬಾಹ್ಯ ಬಣ್ಣ ಬದಲಾಗುವಿಕೆಗೆ ನಾವು ತಿನ್ನುವ ಆಹಾರ, ಕುಡಿಯುವ ಪಾನೀಯ ಅಥವಾ ಇನ್ಯಾವುದೇ ಸಿಗರೇಟು ಗುಟ್ಕಾ ಮುಂತಾದವುಗಳ ಸೇವೆನೆಯಿಂದಾಗಿ ಹಲ್ಲಿನ ಬಣ್ಣ ಬದಲಾಗಬಹುದು. ಇವೆಲ್ಲವನ್ನು ದಂತ ವೈದ್ಯರು ಹಲ್ಲು ಶುಚಿಗೊಳಿಸುವಿಕೆ ಅಥವಾ ಸ್ಕೇಲಿಂಗ್ ಎಂಬ ವಿಧಾನದ ಮೂಲಕ ಶಬ್ಧಾಲೇತವಾದ ತರಂಗಗಳ ಬಳಕೆಯನ್ನು ನೀರಿನ ಜೊತೆ ಮಾಡಿ ಹಲ್ಲಿಗೆ ಯಾವುದೇ ರೀತಿ ಹಾನಿಯಾಗದಂತೆ ತಡೆಯಲಾಗುತ್ತದೆ. ಹಲ್ಲಿನ ಎನಾಮಲ್ ಪದರ ಕರಗುವುದು ಬಿಡಿ, ಹಲ್ಲಿನ ಮೇಲೆ ಯಾವುದೇ ಗೀರು ಕೂಡಾ ಬೀಳುವುದಿಲ್ಲ. ಸ್ಕೇಲಿಂಗ್ ಅತ್ಯಂತ ಸುರಕ್ಷಿತ ಮತ್ತು ಆರೋಗ್ಯಪೂರ್ಣ ಪ್ರಕ್ರಿಯೆ ಆಗಿರುತ್ತದೆ. ಇನ್ನು ಹಲ್ಲಿನ ಬಣ್ಣ ಆಂತರಿಕವಾದ ತೊಂದರೆಗಳಿಂದ ಉಂಟಾಗಿದ್ದಲ್ಲಿ, ಹಲ್ಲನ್ನು ಬ್ಲೀಚಿಂಗ್ ಎಂಬ ಪ್ರಕ್ರಿಯೆ ಮುಖಾಂತರ, ಮೊದಲಿನ ಬಿಳಿ ಬಣ್ಣ ಬರುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಅತ್ಯಂತ ಸುರಕ್ಷಿತವಾದ ಬ್ಲೀಚಿಂಗ್ ದ್ರಾವಣ ಲಭ್ಯವಿದ್ದು, ಹಲ್ಲಿನ ಎನಾಮಾಲ್ ಪದರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ಬ್ಲೀಚಿಂಗ್ ದ್ರಾವಣವನ್ನು ಎಕ್ರಲಿಕ್ ಎಂಬ ವಸ್ತÀುವಿನಿಂದ ತಯಾರಿಸಿದ ವಿಶೇಷ ಟ್ರೇಗಳ ಮುಖಾಂತರ ಹಲ್ಲಿನ ಸಂಪರ್ಕಕ್ಕೆ 60ರಿಂದ 90 ನಿಮಿಷಗಳ ಕಾಲ ಇರುವಂತೆ ಮಾಡಿ ಹಲ್ಲನ್ನು ಬಿಳುಪೀಕರಣ ಮಾಡುತ್ತಾರೆ. ದಂತ ಬ್ಲೀಚಿಂಗ್‍ನಲ್ಲಿ ಎರಡು ವಿಧಗಳಿದ್ದು, ಮೊದಲನೇ ವಿಧಾನದಲ್ಲಿ ದಂತ ವೈದ್ಯರ ಕಚೇರಿಯಲ್ಲಿಯೇ ಈ ಬ್ಲೀಚಿಂಗ್ ಪ್ರಕ್ರಿಯೆ ಮಾಡುತ್ತಾರೆ. ಇನ್ನೊಂದು ವಿಭಾಗದಲ್ಲಿ ದಂತ ವೈದ್ಯರು ನೀಡಿದ ಬ್ಲೀಚಿಂಗ್ ದ್ರಾವಣ ಮತ್ತು ಟ್ರೇಗಳ ಸÀಹಾಯದಿಂದ ರೋಗಿಗಳು ಮನೆಯಲ್ಲಿಯೇ ವೈದ್ಯರ ಸಲಹೆಯಂತೆ ಮಾಡಬಹುದು. ಆಫೀಸ್ ಬ್ಲೀಚಿಂಗ್‍ಗೆ 60ರಿಂದ 90 ನಿಮಿಷ ಹಿಡಿಯುತ್ತದೆ. ಆದರೆ ವೈದ್ಯರು ಸಲಹೆಯಂತೆ ಮನೆಯಲ್ಲಿನ ಬ್ಲೀಚಿಂಗ್‍ಗೆ 2 ರಿಂದ ಮೂರು ತಾಸು ಹಿಡಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಲೇಸರ್ ಬಳಕೆಯನ್ನು ಮಾಡಲು ಆರಂಭಿಸಿದ್ದಾರೆ. ಲೇಸರ್ ಎಂಬ ಬೆಳಕಿನ ನಿರ್ಧಾರಿತವಾದ ವೇಗ ಮತ್ತು ದಿಕ್ಕಿನ ಸಹಾಯದಿಂದ ಅತ್ಯಂತ ಸುರಕ್ಷಿತವಾಗಿ ಹಲ್ಲನ್ನು ಬಿಳುಪಾಗಿಸಲಾಗುತ್ತದೆ.ಲೇಸರ್ ಬಿಳುಪೀಕರಣದ ವೆಚ್ಚ ಜಾಸ್ತಿಯಾಗಿದ್ದರೂ, ಅತ್ಯಂತ ವೈಜ್ಞಾನಿಕ ಮತ್ತು ಸುರಕ್ಷಿತ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕೆಲವೊಮ್ಮೆ ಲೇಸರ್ ಮುಖಾಂತರ ಅಥವಾ ಬ್ಲೀಚಿಂಗ್ ಮುಖಾಂತರವೂ ಹಲ್ಲು ಬಿಳುಪಾಗಿಸಲು ಸಾಧ್ಯವಿಲ್ಲ ಎಂದು ದಂತ ವೈದ್ಯರು ತಿಳಿದುಕೊಂಡಲ್ಲಿ ದಂತ ವಿನಿಯರ್ಸ್ ಅಥವಾ ದಂತ ಮೇಲ್ಕವಚ ಎಂದ ಚಿಕಿತ್ಸೆ ಮುಖಾಂತರ ಹಲ್ಲನ್ನು ಬಿಳುಪಾಗಿಸುತ್ತದೆ. ಕೆಲವೊಮ್ಮೆ ಹಲ್ಲಿನ ನರಕ್ಕೆ ಹಾನಿಯಾಗಿ ಹಲ್ಲು ನಿರ್ಜೀವವಾಗಿದ್ದಲ್ಲಿ ಹಲ್ಲಿನ ಬೇರುನಾಳ ಚಿಕಿತ್ಸೆ ಮಾಡಿ, ಹಲ್ಲಿನ ಕವಚ ಅಥವಾ ಕ್ರೌನ್ ಬಳಕೆ ಮಾಡಿ ಹಲ್ಲಿನ ಮೊದಲಿನ ಬಣ್ಣ ಮತ್ತು ಆಕೃತಿಯನ್ನು ಪಡೆಯಲಾಗುತ್ತದೆ. ಒಟ್ಟಿನಲ್ಲಿ ಹಲ್ಲು ಬಿಳುಪಾಗಿಸುವ ಮೊದಲು, ಹಲ್ಲಿನ ಬಣ್ಣ ಯಾಕಾಗಿ ಬದಲಾಗಿದೆ ಎಂಬುದನ್ನು ಪರಾಮರ್ಷಿಸಲಾಗುತ್ತದೆ. ವ್ಯಕ್ತಿಯ ವಯಸ್ಸು, ಹಲ್ಲಿನ ಆಕೃತಿ, ಹಲ್ಲಿನ ಗಾತ್ರ, ವ್ಯಕ್ತಿಯ ಕೆಲಸ ಮುಂತಾದ ಎಲ್ಲಾ ವಿಚಾರಗಳನ್ನು ವಿಮರ್ಷಿಸಿ ಯಾವ ರೀತಿಯ ಚಿಕಿತ್ಸೆ ಎಂಬುದನ್ನು ದಂತ ವೈದ್ಯರೇ ನಿರ್ಧರಿಸುತ್ತಾರೆ.

ಕೊನೆಮಾತು :
ಹಲ್ಲು ಬಿಳುಪೀಕರಣ ಎಂಬವುದು ತಾತ್ಕಾಲಿಕ ಪರಿಹಾರವಾಗಿದ್ದು, ಶಾಶ್ವತ ಪರಿಹಾರವಲ್ಲ, ಅಗತ್ಯವಿದ್ದಾಗ ದಂತ ವೈದ್ಯರ ಬಳಿಯೇ ಹಲ್ಲನ್ನು ಬಿಳುಪಾಗಿಸಬೇಕು. ದಂತ ಬಿಳುಪೀಕರಣ ಮಾಡಿದ ಬಳಿಕ ಹಲ್ಲಿನ ಬಣ್ಣ ಮಾಸದಂತೆ ತಡೆಯಲು, ಹಲ್ಲಿನ ಬಣ್ಣ ಕುಂದಿಸುವ ಆಹಾರ, ಪಾನೀಯ ಮತ್ತು ಹವ್ಯಾಸಗಳಿಗೆ ತಿಲಾಂಜಲಿ ಇಡಬೇಕು. ಹೀಗೆ ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ, ಸುಮಾರು ಒಂದು ವರ್ಷದವರೆಗೆ ದಂತ ಬಿಳುಪೀಕರಣದ ಫಲಿತಾಂಶವನ್ನು ನಿಯಂತ್ರಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಹಲ್ಲು ಬಿಳುಪೀಕರಣ ದ್ರಾವಣ ಬಳಸಲೇಬಾರದು. ಅಥವಾ ಸಾಮಾಜಿಕ ಜಾಲತಾಣದಲ್ಲಿ ಉಚಿತವಾಗಿ ಸಲಹೆ ನೀಡುವ ಅತೀ ಬುದ್ಧಿವಂತ ವ್ಯಕ್ತಿಗಳ ಮನೆ ಮದ್ದನ್ನು ಬಳಸಲೇಬಾರದು. ಯಾಕೆಂದರೆ ಈ ರೀತಿಯ ದ್ರಾವಣಗಳಿಂದ ಹಲ್ಲಿನ ಎನಾಮಲ್ ಪದರದ ಮೇಲೆ ಹಾನಿ, ವಸಡಿನ ಮೇಲೆ ಗಾಯ, ವಸಡಿನಲ್ಲಿ ರಕ್ತಸ್ರಾವ, ತುರಿಕೆ, ಅಲರ್ಜಿ ಮುಂತಾದ ಶಾಶ್ವತ ತೊಂದರೆಗಳಿಗೆ ನಾಂದಿ ಹಾಡಬಹುದು. ಹಲ್ಲು ಎನ್ನುವುದು ಅತ್ಯಂತ ಗಟ್ಟಿಯಾದ ಅಂಗವಾಗಿದ್ದರೂ ಹಲ್ಲಿನ ಎನಾಮಾಲ್ ಪದರಕ್ಕೆ ಪುನರ್ ಉತ್ಪತ್ತಿಯಗುವ ಶಕ್ತಿ ಇಲ್ಲದ ಕಾರಣ, ಒಮ್ಮೆ ಎನಾಮಲ್ ಪದರ ಕರಗಿದ ಬಳಿಕ, ಕೃತಕವಾದ ಹಲ್ಲಿನ ಬಣ್ಣದ ವಸ್ತುಗಳಿಂದ ಹಲ್ಲಿನ ಎನಾಮಲ್ ಪದರವನ್ನು ಬದಲಿಸಲಾಗುತ್ತದೆ ಎಂಬ ಕಟು ಸತ್ಯವನ್ನು ರೋಗಿಗಳು ಅರಿತುಕೊಳ್ಳಲೇಬೇಕು. ಈ ಕಾರಣದಿಂದಲೇ ಹಲ್ಲು ಬಿಳುಪೀಕರಣಕ್ಕೆ ಸ್ವಯಂ ಚಿಕಿತ್ಸೆ, ಸ್ವಂತ ಪ್ರಯೋಗಗಳನ್ನು ಮಾಡುವ ದುಸ್ಸಾಹಸಕ್ಕೆ ಯಾವುದೇ  ರೋಗಿಗಳು ಕೈ ಹಾಕಲೇಬಾರದು. ಹಾಗೇ ಮಾಡಿದರೆ ಹಲ್ಲು ಕರಗಿ ಕೈಸುಟ್ಟುಕೊಳ್ಳಬೇಕಾದ ಪ್ರಮೇಯ ಬರುವ ಎಲ್ಲ ಸಾಧ್ಯತೆಗಳೂ ಮುಕ್ತವಾಗಿದೆ. ಈ ಕಾರಣದಿಂದಲೇ ಕಳೆದು ಹೋದ ಅಥವಾ ಮಾಸಿ ಹೋದ ಹಲ್ಲಿನ ಬಣ್ಣವನ್ನು ಪುನಃ ಪಡೆಯಲು ದಂತ ವೈದ್ಯರು ಸೂಚಿಸಿದ ವೈಜ್ಞಾನಿಕವಾದ ಬ್ಲೀಚಿಂಗ್ ಅಥವಾ ಇನ್ಯಾವುದೇ ಔಷಧಿ ಪದ್ಧತಿಯನ್ನು ಬಳಸುವುದು ಸೂಕ್ತ ಎಂಬುದು ದಂತ ವೈದ್ಯರ ಕಳಕಳಿಯ ವಿಜ್ಞಾಪನೆ. ಮತ್ತು ಕಳೆದು ಹೋದ ಹಲ್ಲಿನ ಬಣ್ಣವನ್ನು ಮರಳಿ ಪಡೆದಾಗ ವ್ಯಕ್ತಿಯ ಆತ್ಮವಿಶ್ವಾಸ ಮನೋಬಲ ಮತ್ತು ಜೀವನೋತ್ಸಾಹ ಇಮ್ಮಡಿಯಾಗಿ ಸುಂದರ, ಸುದೃಡ ಸಮಾಜ ನಿರ್ಮಾಣ ಸಾಧ್ಯವಿದೆ.

✒️ಡಾ|| ಮುರಲೀ ಮೋಹನ್ ಚೂಂತಾರು

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!