ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆ ಮೇ. 21 ರಂದು ನಡೆದಿದ್ದು, ವಿದ್ಯಾರ್ಥಿನಿ ತಂದೆಗೆ ಮಾಡಿ ಕರೆಸಿಕೊಂಡಾಗ ಆ ಯುವಕ ಓಡಿ ಪರಾರಿಯಾದ ಎನ್ನಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೋಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ.
ಸುಳ್ಯ ಕಲ್ಲುಮುಟ್ಲು ಕಡೆಯ ಯುವತಿಯೊಬ್ಬಳು ಕಂಪ್ಯೂಟರ್ ತರಗತಿ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಗಾಂಧಿನಗರದಲ್ಲಿ ಹೋಗುತ್ತಿದ್ದಾಗ ಅಪರಿಚಿತ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದು ಮಾತನಾಡಲು ಪ್ರಯತ್ನಿಸಿ, ಐ ಲವ್ ಯು ಎಂದನೆನ್ನಲಾಗಿದೆ. ಇದರಿಂದ ಕಿರಿಕಿರಿ ಅನುಭವಿಸಿದ ಯುವತಿ ಗಾಂಧಿನಗರದಲ್ಲಿಯೇ ಇರುವ ತನ್ನ ತಂದೆಗೆ ಫೋನ್ ಮಾಡಿದಳು. ಸ್ಥಳಕ್ಜೆ ಕೂಡಲೇ ತಂದೆ ಬಂದಾಗ ಯುವಕ ಓಟಕ್ಕಿತ್ತ. ತಂದೆ ಆತನನ್ನು ಹಿಡಿಯಲು ಹಿಂಬಾಲಿಸಿದರಾದರೂ ಆತ ಓಡಿ ತಪ್ಪಿಸಿಕೊಂಡನೆನ್ನಲಾಗಿದೆ.
ಘಟನೆ ತಿಳಿದ ಭಜರಂಗದಳದ ಕಾರ್ಯಕರ್ತರು ಮನೆಯವರ ಮುಖಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಯುವಕನ ಪತ್ತೆಗಾಗಿ ಸಿ.ಸಿ. ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದು, ಇದರ ಆಧಾರದಲ್ಲಿ ತನಿಖೆ ಮಾಡುತ್ತಿದ್ದಾರೆ ಎನ್ನಲಾಗಿದೆ.
- Thursday
- November 21st, 2024