ಮೇ.31 ರಂದು ಅದ್ದೂರಿ ಶತಮಾನೋತ್ಸವ “ಶತ ಸಂಭ್ರಮ” ಕಾರ್ಯಕ್ರಮ
ಮೇ.16 ರಂದು ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
1925 ಮೇ.25 ರಂದು ರೈತರಿಗಾಗಿ ಪ್ರಾರಂಭಗೊಂಡು ಇದೀಗ ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ನಾಲ್ಕು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವಂತಹ ಸುಳ್ಯ ತಾಲೂಕಿನ ಏಕೈಕ ಸಂಸ್ಥೆಯಾದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಮೇ.31 ರಂದು ಅದ್ದೂರಿ ಶತಮಾನೋತ್ಸವ “ಶತ ಸಂಭ್ರಮ” ಕಾರ್ಯಕ್ರಮ ನಡೆಯಲಿದೆ. ಮೇ.16 ರಂದು
ಶತಮಾನೋತ್ಸವದ “ಶತ ಸಂಭ್ರಮ” ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಸಂಘದ ಉಪಾಧ್ಯಕ್ಷರಾದ ಶೇಖರ ಅಂಬೆಕಲ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ, ಸಂಘದ ನಿರ್ದೇಶಕರುಗಳಾದ ವಿನೂಪ್ ಮಲ್ಲಾರ, ಮಣಿಕಂಠ ಕೊಳಗೆ, ತಾರನಾಥ ಮುಂಡಾಜೆ, ಗಿರೀಶ್ ಕೂಜುಗೋಡು-ಕಟ್ಟೆಮನೆ, ರಾಜೇಶ್ ಪರಮಲೆ, ಮೋನಪ್ಪ ಕೊಳಗೆ, ವಿಜಯ ಶಿವರಾಮ್ ಕಜ್ಜೋಡಿ, ವಿಜಯ ಕೂಜುಗೋಡು, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಸಹಕಾರಿ ಸಂಘವು ಕಟ್ಟ ಗೋವಿಂದಯ್ಯ ಅವರ ಮನೆಯಲ್ಲಿ ಪ್ರಾರಂಭಗೊಂಡು ಕಾರ್ಯನಿರ್ವಹಿಸಿ ಕೆಲವು ವರ್ಷಗಳ ನಂತರ ಕಜ್ಜೋಡಿ ಬೊಳಿಯಪ್ಪ ಗೌಡ ಅವರ ಮನೆಯಲ್ಲಿ ಮುಂದುವರಿದು ಕೆಲವು ವರ್ಷಗಳ ನಂತರ ಹರಿಹರ ಪಲ್ಲತ್ತಡ್ಕದ ಶ್ರೀಮತಿ ಎಸ್.ಎನ್ ಭವಾನಿ ಶಿವರಾಮ ಮುಂಡಾಜೆ ಅವರ ಪೋಷಕರಾದ ತಿಮ್ಮಪ್ಪ ಮುಂಡಾಜೆ ಹಾಗೂ ಸೀತಮ್ಮ ದಂಪತಿಗಳು ಹರಿಹರದಲ್ಲಿ ಸ್ಥಳದಾನ ಮಾಡಿದ್ದು, ಸಂಘದ ಸ್ವಂತ ಕಛೇರಿ ನಿರ್ಮಾಣಗೊಂಡಿತು. ಬಾಳುಗೋಡು ಗ್ರಾಮದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸಹಕಾರಿ ಸಂಘವೊಂದಿದ್ದು, 1975 ರಲ್ಲಿ ಅದನ್ನು ಈಗಿನ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದೊಂದಿಗೆ ವಿಲೀನಗೊಳಿಸಲಾಯಿತು. 2009 ಮೇ.28 ರಂದು ಹರಿಹರ ಪಲ್ಲತ್ತಡ್ಕದ ಪ್ರಧಾನ ಕಛೇರಿ ಪುನರ್ ನಿರ್ಮಾಣಗೊಂಡು ಲೋಕಾರ್ಪಣೆಯಾಯಿತು.
2014 ಫೆ.24 ರಂದು ಕೊಲ್ಲಮೊಗ್ರದಲ್ಲೂ ಸುಸಜ್ಜಿತವಾದ ಶಾಖಾ ಕಛೇರಿ ನಿರ್ಮಾಣಗೊಂಡಿದ್ದು, ಸಾಲ ಸೌಲಭ್ಯದ ವ್ಯವಸ್ಥೆಗಳನ್ನು ಅಲ್ಲೇ ಮಾಡಲಾಗಿದ್ದು, ಅಭಿವೃದ್ಧಿ ಸಾಲಗಳಿಗೆ ಮಾತ್ರ ಪ್ರದಾನ ಕಛೇರಿಗೆ ಬರುವಂತೆ ಮಾಡಲಾಗಿದೆ. ಶಾಖಾ ಕಛೇರಿಯ ಕಾರ್ಯಚಟುವಟಿಕೆಗಳನ್ನು ಪ್ರದಾನ ಕಛೇರಿಯಿಂದಲೇ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂಘವು ತನ್ನ ವ್ಯಾಪ್ತಿಯ ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಬಾಳುಗೋಡು ಕಲ್ಮಕಾರು ಗ್ರಾಮಗಳ ಜನರಿಗೆ ಹಾಗೂ ತಾಲೂಕಿನ ಸಹಕಾರಿ ಸಂಘಗಳಿಗೆ, ಸಂಘದ ಸಿಬ್ಬಂದಿಗಳಿಗೆ ಕ್ರೀಡಾ ಸ್ಪರ್ಧೆ ನಡೆಸಿದೆ.
ಸಂಘದ ಶಾಶ್ವತ ಯೋಜನೆಯಾಗಿ ಹರಿಹರ ಪಲ್ಲತ್ತಡ್ಕದಲ್ಲಿ ಪೆಟ್ರೋಲ್ ಬಂಕ್ ಸ್ಥಾನೆಯ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಎಂ.ಆರ್.ಪಿ.ಎಲ್ ಪೆಟ್ರೋಲ್ ಬಂಕ್ ಪ್ರಾರಂಭಗೊಳ್ಳಲಿದೆ. ಅದೇ ರೀತಿ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕಂಪೌಂಡ್ ರಚನೆಗೊಂಡಿದ್ದು, ಪ್ರದಾನ ಕಛೇರಿ ಮುಂಭಾಗ ಇಂಟರ್ ಲಾಕ್ ಕೆಲಸ ಪ್ರಗತಿಯಲ್ಲಿದ್ದು, ಶತಮಾನೋತ್ಸವದ ಸ್ಮರಣ ಸಂಚಿಕೆಯ ಕಾರ್ಯ ನಡೆಯುತ್ತಿದೆ.(ವರದಿ : ಉಲ್ಲಾಸ್ ಕಜ್ಜೋಡಿ)