ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನೂತನಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆಯು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಕಚೇರಿ ಸುಳ್ಯದಲ್ಲಿ ಜರುಗಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮವು ಪಕ್ಷ ಭೇದವಿಲ್ಲದೆ ಕುಟುಂಬದ ಸದಸ್ಯರ ಕಾರ್ಯಕ್ರಮದಂತೆ ನಡೆಯುತ್ತಿದ್ದು ಪೂಜ್ಯ ಕಾವಂದರಾದ ಡಾ.ವಿರೇಂದ್ರ ಹೆಗ್ಗಡೆ ಯವರ ಚಿಂತನೆಯಿಂದ ಸಾಮಾನ್ಯ ಜನರ ಸಬಲೀಕರಣವಾಗಿದೆ. ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವ ಯೋಜನೆಯ ವೇದಿಕೆ ಇದಾಗಿದ್ದು, ಯೋಜನೆಯ ಜತೆ ಕೈ ಜೋಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟು ಪಕ್ಷ ಬೇಧ ಮರೆತು ಶಾಸಕಿಯಾಗಿ ಸೇವೆ ಮಾಡುತ್ತೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನೂತನಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆಯ ಸಮಾರಂಭದಲ್ಲಿ ಮತನಾಡುತ್ತಾ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷ ಲೋಕನಾಥ ಅಮೆಚೂರ್, ನಿಕಟ ಪೂರ್ವ ಅಧ್ಯಕ್ಷರಾದ ಪಿ.ಸಿ.ಜಯರಾಮ, ವಿಶ್ವನಾಥ ರೈ ಕಳಂಜ, ಶ್ರೀಮತಿ ವಿಮಲಾ ರಂಗಯ್ಯ ಸುಬ್ರಹ್ಮಣ್ಯ, ಭವಾನಿ ಶಂಕರ ಅಡ್ತಲೆ, ತಾಲೂಕು ಪ್ರಗತಿ ಬಂಧು ಸ್ವ ಸಹಾಯ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಉಡುಪಿ ವಿಭಾಗದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸುಳ್ಯ ತಾಲೂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಲೋಕನಾಥ ಅಮೆಚೂರ್ ತಂಡದ ಸದಸ್ಯರಿಗೆ ಜಿಲ್ಲಾಧ್ಯಕ್ಷರು ಪದ ಪ್ರಧಾನ ನೆರವೇರಿಸಿದರು.
ಶಾಸಕಿ ಕು.ಭಾಗೀರಥಿ ಮುರುಳ್ಯ ಹಾಗೂ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ವಿಶ್ವನಾಥ ರೈ ಕಳಂಜ ರವರನ್ನು ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಗಣೇಶ್ ಆಚಾರ್ಯ ರವರು ಮಾದಕ ವಸ್ತುಗಳನ್ನು ಬಳಸುವುದರಿಂದ ಸಮಾಜದಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಉಪನ್ಯಾಸ ನೀಡಿದರು.
ಬಾಂಧವ್ಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಪ್ರಾರ್ಥಿಸಿ ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ ಸ್ವಾಗತಿಸಿದರು.ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಜನೆಯ ಕೃಷಿ ಅಧಿಕಾರಿ ರಮೇಶ್ ವರದಿ ಮಂಡಿಸಿದರು. ಪಂಜ ವಲಯ ಮೇಲ್ವಿಚಾರಕಿ ಕಲಾವತಿ ವಂದಿಸಿದರು. ಅಜ್ಜಾವರ ವಲಯ ಮೇಲ್ವಿಚಾರಕಿ ಶ್ರೀಮತಿ ವಿಶಾಲ ಕಾರ್ಯಕ್ರಮ ನಿರೂಪಿಸಿದರು.