ಸುಳ್ಯ: ಹಿರಿಯ ಯಕ್ಷಗಾನ ಕಲಾವಿದ ಸಬ್ಬಣಕೋಡಿ ಕೃಷ್ಣ ಭಟ್(60) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನೆಗೆ ಹೋಗದೇ ತಿರುಗಾಡುತ್ತಿದ್ದ ಅವರು ಸುಳ್ಯ ಬಸ್ ನಿಲ್ದಾಣದ ಸಮೀಪದ ಕಟ್ಟಡವೊಂದರ ಎದುರು ಭಾನುವಾರ ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರು.
ಬಳಿಕ ಕಟ್ಟಡದ ಮಾಲಕರು ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿಯವರಿಗೆ ಮಾಹಿತಿ ನೀಡಿ, ಅವರು ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ವೈದ್ಯರು ಸಾವು ದೃಢಪಡಿಸಿದರು.
ಪುತ್ತೂರು ತಾಲೂಕಿನ ಕಬಕ ಸಮೀಪದ ಸಬ್ಬಣಕೋಡಿಯವರಾದ ಕೃಷ್ಣ ಭಟ್ ಒಂದು ಕಾಲದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದರಾಗಿದ್ದು, ನೃತ್ಯ ಗುರುಗಳಾಗಿ ನೂರಾರು ಶಿಷ್ಯರಿಗೆ ಯಕ್ಷಗಾನ ಶಿಕ್ಷಣ ನೀಡಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಕುಡಿತದ ಚಟಕ್ಕೆ ಬಲಿಯಾಗಿ ಸುಳ್ಯದಲ್ಲಿ ತಿರುಗಾಡಿಕೊಂಡಿದ್ದರು.
ಅವರು ಪತ್ನಿ ಉಷಾ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರರಾದ ಸಬ್ಬಣಕೋಡಿ ರಾಮಭಟ್, ಸಹೋದರಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ವಿಟ್ಲದಲ್ಲಿರುವ ಅವರ ಮಗಳ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಿತು.
- Thursday
- November 21st, 2024