ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯಲ್ಲಿ ಜೂ 21.ರಂದು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ‘ ಆರೋಗ್ಯಕ್ಕಾಗಿ ಯೋಗ ’ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವೈದ್ಯರು ಮತ್ತು ಯೋಗ ಪರಿಣಿತರಾದ ಡಾ. ಶಶಿಧರ್ ಹಾಸನಡ್ಕ ಇವರು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ‘ಯೋಗ ಮತ್ತು ಧ್ಯಾನದ ಉಪಯೋಗಗಳು’ ಎಂಬ ವಿಷಯದ ಬಗ್ಗೆ ವಿವರಿಸಿದ ಡಾ. ಶಶಿಧರ್ ಹಾಸನಡ್ಕ ಹಲವಾರು ಮಾಹಿತಿಗಳನ್ನು ನೀಡಿ ಉತ್ತಮ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಸಾಧನೆಗೆ ಮಾರ್ಗಗಳನ್ನು ಸೂಚಿಸಿದರು.
ಯೋಗ ನಮ್ಮ ಉಸಿರು. ಯೋಗವು ಮನುಷ್ಯನ ಗರ್ಭಾವಸ್ಥೆಯಲ್ಲಿ ಪ್ರಾರಂಭವಾಗಿ ಜೀವಿತದ ಕೊನೆಯವರೆಗೂ ಮುಂದುವರಿಯುತ್ತದೆ. ಆದುದರಿಂದ ಇದುವೇ ಜೀವನದ ಭದ್ರ ಬುನಾದಿ ಎಂದು ಅವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಧ್ಯಾನವು ಮಾನವನ ಏರುಪೇರು ಜೀವನಕ್ರಮಕ್ಕೆ ಸೂಕ್ತ ಔಷಧವಾಗಿದೆ, ಯಾವುದೇ ಔಷಧಗಳು ಕೇವಲ ದೇಹದ ಒಳಗೆ ಪ್ರವೇಶಿಸಬಹುದೇ ಹೊರತು ಮನಸ್ಸಿನ ಆರೋಗ್ಯ ಕಾಪಾಡುವುದು ಸಾಧ್ಯವಿಲ್ಲ. ಮನಸ್ಸಿನ ಆರೋಗ್ಯವು ಸರಿಯಾದ ಯೋಗ್ಯಭ್ಯಾಸದಿಂದ ಮಾತ್ರ ಸಾಧ್ಯ ಎಂಬ ತಿಳುವಳಿಕೆ ನೀಡಿದರು.
ಕರಣ ಮತ್ತು ಧ್ಯಾನ , ಯೋಗ ಮತ್ತು ವ್ಯಾಯಾಮ , ಸಂಗೀತ ಮತ್ತು ಏಕಾಗ್ರತೆ, ಸ್ಮರಣೆ ಮತ್ತು ಕಲಿಕೆ ಮುಂತಾದ ಮೌಲ್ಯಯುತ ಮಾಹಿತಿಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಶಾಲಾ ಪ್ರಾಂಶುಪಾಲರಾದ ಟಿ.ಎಂ.ದೇಚಮ್ಮ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಸಾಂಸ್ಕ್ರಿತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಯೋಗ ಗೀತೆ ಹಾಗೂ ಯೋಗ ನೃತ್ಯ ಪ್ರದರ್ಶನ ನಡೆಯಿತು . ಶಾಲಾ ವಿದ್ಯಾರ್ಥಿ ಧನುಷ್‍ರಾಮ್ ಕಾರ್ಯಕ್ರಮ ನಿರೂಪಿಸಿದರು. ಆಪ್ತಿಲಕ್ಷ್ಮಿ ನೆಟ್ಟಾರು ಸ್ವಾಗತಿಸಿ ಮತ್ತು ಆಪ್ತಿ ಬಿ.ಎಸ್ ಇವರು ವಂದನಾರ್ಪಣೆಗೈದರು.