ಅತ್ಯಂತ ಕಷ್ಟಗಳನ್ನು ಅನುಭವಿಸಿ, ಹಂತ ಹಂತವಾಗಿ ಮೇಲೆ ಬಂದು ಇದೀಗ ಸುಳ್ಯದ ಶಾಸಕಿಯಾಗಿ ಆಯ್ಕೆಯಾದ ಶಾಸಕಿ ಭಾಗೀರಥಿ ಮುರುಳ್ಯ ಅವರೊಬ್ಬ ದಿಟ್ಟ ಮಹಿಳೆ ಎಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು.
ಅವರು ಸುಳ್ಯ ಯುವಜನ ಸಂಯುಕ್ತ ಮಂಡಳಿ ಮತ್ತು ಯುವಜನ ಸೇವಾ ಸಂಸ್ಥೆ ಆಶ್ರಯದಲ್ಲಿ ಶನಿವಾರ ನಡೆದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿ ಮಾತನಾಡಿದರು. ನೀವು ಕೇವಲ ಸುಳ್ಯಕ್ಕೆ ಸೀಮಿತವಲ್ಲ. ಕೊಡಗಿನಿಂದ ಕಾರವಾರದ ವರೆಗೆ ನೀವು ಏಕೈಕ ದಲಿತ ಮಹಿಳಾ ಶಾಸಕಿ. ಸಮಾಜ ನಿಮ್ಮಿಂದ ತುಂಬ ನಿರೀಕ್ಷೆ ಮಾಡುತ್ತಿದೆ. ಶಾಸಕಿಯಾಗಿ ಹೊಸ ಕ್ರಾಂತಿ ಮಾಡಲು, ಚರಿತ್ರೆ ನಿರ್ಮಿಸಲು ನಿಮಗೆ ಸಾಧ್ಯವಾಗಲಿ. ಸರಳತೆ ಹಾಗೂ ಸೌಜನ್ಯ ಮೈಗೂಡಿಸಿಕೊಂಡಿರುವ ನಿಮಗೆ ಪಕ್ಷಬೇಧ ಮರೆತು ಸಹಕಾರ ನೀಡುತ್ತೇವೆ ಎಂದವರು ಹಾರೈಸಿದರು.
ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕ ಗೌರವ ಕಾರ್ಯದರ್ಶಿ ಎಂ.ಮೀನಾಕ್ಷಿ ಸನ್ಮಾನ ನೆರವೇರಿಸಿದರು.ಸನ್ಮಾನ ಸ್ವೀಕರಿಸಿದ ಶಾಸಕಿ ಭಾಗೀರಥಿ ಮುರುಳ್ಯ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಗೌರವಾಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಸಂಜಯ್ ನೆಟ್ಟಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ವಂದಿಸಿ, ಕೋಶಾಧಿಕಾರಿ ಮುರಳಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.