Ad Widget

ನೆಟ್ವರ್ಕ್ ಇಲ್ಲದಿದ್ದರೂ ಸಾಧನೆ ಮಾಡಿದ ಯೂಟ್ಯೂಬರ್ – ಕಷ್ಟದಲ್ಲಿರುವ ಹಲವರಿಗೆ ಧ್ವನಿಯಾದ ವಿ.ಜೆ ವಿಖ್ಯಾತ್

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು, ಯಶಸ್ವಿಯಾಗಬೇಕು ಅನ್ನುವ ಕನಸಿರುತ್ತದೆ. ಆದರೆ ಯಶಸ್ಸು ಎನ್ನುವುದು ಅಂದುಕೊಂಡ ತಕ್ಷಣ ಸಿಗುವಂಥದ್ದಲ್ಲ ಅಥವಾ ಒಂದೆರಡು ದಿನದಲ್ಲಿ ಆಗುವಂಥದ್ದಲ್ಲ. ಎಷ್ಟೇ ಕಷ್ಟವಾದರೂ ಕಂಡ ಕನಸಿನ ಬೆನ್ನು ಬಿದ್ದು ಎಷ್ಟು ಬಾರಿ ಸೋತರೂ ಕೂಡ ಛಲ ಬಿಡದೇ ಹೋರಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಇಂದು ಈ ಮಾತಿಗೆ ನಮ್ಮೆದುರು ಸ್ಪಷ್ಟ ಉದಾಹರಣೆಯಾಗಿ ನಿಂತಿರುವವರು ಯೂಟ್ಯೂಬರ್ ಹಾಗೂ ನಿರೂಪಕ ವಿ.ಜೆ ವಿಖ್ಯಾತ್.ನೆಟ್ ವರ್ಕ್ ಸಿಗದ ಪ್ರದೇಶದಿಂದ ಬಂದ ಇವರು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಾರ್ಪಣೆಯ ಯುವಕ. ಬಾಲ್ಯದಲ್ಲಿ ನಿರೂಪಣೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಪದವಿ ಮುಗಿಸಿದ ನಂತರ ಕ್ರಿಕೆಟ್, ಕಬ್ಬಡ್ಡಿ ಸೇರಿದಂತೆ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಾ ತನ್ನಿಷ್ಟದ ನಿರೂಪಣೆಯ ಹಾದಿಯನ್ನು ತುಳಿದ ಇವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ ಪ್ರಸಿದ್ಧಿಯಾದ ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತದ್ದು ಇವರ ತಾಯಿ ಸರೋಜಿನಿ, ಸಹೋದರ ವಿಜೇತ್ ಹಾಗೂ ಸಹೋದರಿ ಭವ್ಯಶ್ರೀ. ನಂತರದ ದಿನಗಳಲ್ಲಿ ನಿರೂಪಣೆಯ ಜೊತೆಗೆ ಸುಳ್ಯದಲ್ಲಿ ಆರಂಭವಾದ ಒಂದು ಖಾಸಗಿ ಉದ್ಯಮಕ್ಕೆ ಜೊತೆಯಾದರು. ಆದರೆ ದುರದೃಷ್ಟವಶಾತ್ ಕೆಲವೇ ತಿಂಗಳುಗಳಲ್ಲಿ ಆ ಉದ್ಯಮ ಮುಚ್ಚಿ ಹೋಯಿತು. ಆದರೆ “ಆಗುವುದೆಲ್ಲಾ ಒಳ್ಳೆಯದಕ್ಕೆ” ಎನ್ನುವ ಮಾತಿನಂತೆ ಇವರ ಬದುಕಿಗೆ ಹೊಸ ತಿರುವು ಕೊಟ್ಟದ್ದು ಇವರು 1 ವರ್ಷದ ಹಿಂದೆ ಪ್ರಾರಂಭಿಸಿದ ಯೂಟ್ಯೂಬ್ ಚಾನಲ್. ಈ ಯೂಟ್ಯೂಬ್ ಚಾನಲ್ ನಲ್ಲಿ ಇವರು ಹೊಸ ಹೊಸ ಪ್ರದೇಶಗಳನ್ನು ವೀಕ್ಷಕರಿಗೆ ತೋರಿಸುವುದರ ಜೊತೆಗೆ ಸಾಧಕರ, ವ್ಯಕ್ತಿಗಳ ಸಂದರ್ಶನ ಹಾಗೂ “ಅಮ್ಮನ ಕೈರುಚಿ” ಎಂಬ ಹೆಸರಿನಲ್ಲಿ ಅಡುಗೆಗಳನ್ನು ಕೂಡ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಕರಿಗೆ ತೋರಿಸುತ್ತಾ ಮುಂದುವರೆದರು. ತಾನಿರುವ ಪ್ರದೇಶದಲ್ಲಿ ನೆಟ್ ವರ್ಕ್ ಸಿಗದಿದ್ದರೂ ಕೂಡ ವಿಡಿಯೋ ಎಡಿಟಿಂಗ್ ಮಾಡಿ ನಂತರ ಮನೆಯಿಂದ ಸುಮಾರು 4-5 ಕಿಲೋಮೀಟರ್ ದೂರದ ನೆಟ್ ವರ್ಕ್ ಸಿಗುವ ಸ್ಥಳಕ್ಕೆ ಬಂದು ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಇವರ ಈ ಪರಿಶ್ರಮದ ಫಲ ಎಂಬಂತೆ ಕೆಲವೇ ಸಮಯದಲ್ಲಿ ಜನರು ಇವರ ವಿಡಿಯೋಗಳನ್ನು ಇಷ್ಟಪಡಲು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ನೋಡುನೋಡುತ್ತಿದ್ದಂತೆ ಈ ಯೂಟ್ಯೂಬ್ ಚಾನಲ್ ಬೆಳೆದು ಇಂದು ಸುಮಾರು 40 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಸಂಪಾದಿಸಿದೆ. ಇಲ್ಲಿಯವರೆಗೆ 386ಕ್ಕೂ ಅಧಿಕ ವಿಡಿಯೋಗಳು ಇವರ ಯೂಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಆಗಿದ್ದು, ಇವರ ಈ ಯೂಟ್ಯೂಬ್ ಸಾಧನೆಯ ಹಾದಿಯಲ್ಲಿ ಮನೆಯವರ ಬೆಂಬಲದ ಜೊತೆಗೆ ಗೆಳೆಯರಾದ ಚಂದು ಸುಳ್ಯ, ಕಾರ್ತಿಕ್.ಎನ್.ಎಲ್, ಕಿಶೋರ್ ದುಗ್ಗಲಡ್ಕ, ಮುರಳಿ ಕೃಷ್ಣ, ಅಮೃತೇಶ್ ರವರ ಬೆಂಬಲವೂ ಇತ್ತು. ಇವರು ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಸಂದರ್ಶನಗಳ ಜೊತೆಗೆ ಅಸಹಾಯಕ ಸ್ಥಿತಿಯಲ್ಲಿ ಇರುವಂತಹವರ ಕಷ್ಟಗಳನ್ನು ತನ್ನ ಯೂಟ್ಯೂಬ್ ಚಾನಲ್ ಮೂಲಕ ತೋರಿಸಿ ಅವರ ಚಿಕಿತ್ಸೆಗಾಗಿ ಧನ ಸಹಾಯ ಮಾಡುವಂತೆ ವಿನಂತಿಸಿ ವೀಕ್ಷಕರ ಸಹಕಾರದೊಂದಿಗೆ ಅಸಹಾಯಕರ ಕಣ್ಣೀರು ಒರೆಸುವ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ ವಿಜೆ ವಿಖ್ಯಾತ್ ಮತ್ತವರ ಗೆಳೆಯರು. ಇಲ್ಲಿಯವರೆಗೆ ಇವರ ಮನವಿಗೆ ಸ್ಪಂದಿಸಿ ವೀಕ್ಷಕರಿಂದ ಹರಿದು ಬಂದ ಹಣ ಸುಮಾರು 15 ಲಕ್ಷ ರೂಪಾಯಿ. ತಾನು ಏನನ್ನು ಅಪೇಕ್ಷಿಸದೇ ತನ್ನ ಕೆಲಸಗಳನ್ನು ಶ್ರದ್ದೆಯಿಂದ ಮಾಡುತ್ತಾ ಮುಂದುವರೆದ ವಿ.ಜೆ ವಿಖ್ಯಾತ್ ಇಂದು ಒಬ್ಬ ಯಶಸ್ವಿ ಯೂಟ್ಯೂಬರ್ ಹಾಗೂ ನಿರೂಪಕ.ಕಠಿಣ ಪರಿಶ್ರಮ ಎಂದಿಗೂ ಸೋಲುವುದಿಲ್ಲ ಎಂಬ ಮಾತಿನ ಮೇಲೆ ನಂಬಿಕೆ ಇರಿಸಿರುವ ಜೀವನದಲ್ಲಿ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವ ಮಾತಿಗೆ ಸ್ಪಷ್ಟ ಉದಾಹರಣೆಯಾಗಿರುವ ವಿಖ್ಯಾತ್ ರವರ ಈ ಪಯಣ ಇದೇ ರೀತಿ ಮುಂದುವರೆದು ಅವರು ಇನ್ನೂ ಯಶಸ್ಸಿನ ಉತ್ತುಂಗಕ್ಕೆ ಏರಲಿ ಎನ್ನುವುದು ನನ್ನ ಆಶಯ…

. . . . . . .

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!