ಮಳೆಗಾಲ ಆರಂಭಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಆಡಳಿತ ವರ್ಗ ಕಣ್ಮುಚ್ಚಿ ಕುಳಿತಿದ್ದು ನಾಗರಿಕರಿಗೆ ಮತ್ತೊಮ್ಮೆ ಸಾಂಕ್ರಾಮಿಕ ರೋಗ ಭೀತಿ ಹರಡುವ ಆತಂಕ ಗುತ್ತಿಗಾರು ಪರಿಸರದಲ್ಲಿ ಉಂಟಾಗಿದೆ.
ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗುತ್ತಿಗಾರು ಪೇಟೆಯಲ್ಲಿ ಚರಂಡಿಯಲ್ಲಿ ಕಸಕಡ್ಡಿ ತುಂಬಿದ್ದು, ನೀರು ಸರಾಗವಾಗಿ ಹರಿಯಲು ಅಡೆತಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗುತ್ತಿಗಾರಿನಲ್ಲಿ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಗುತ್ತಿಗಾರು ಪೇಟೆಯ ಕೆಳಭಾಗದಲ್ಲಿ ಚರಂಡಿ ಸಂಪೂರ್ಣವಾಗಿ ಬಂದ್ ಆಗಿದ್ದು ಪಕ್ಕದ ಅಂಗಡಿಗಳ ಕೋಳಿತ್ಯಾಜ್ಯ ನೀರು ಸೇರಿದಂತೆ ಕೊಳಚೆ ನೀರು ಚರಂಡಿಯಲ್ಲೇ ಶೇಖರಣೆಗೊಂಡಿದೆ. ಕಳೆದ ಒಂದು ತಿಂಗಳಿನಿಂದಲೂ ಈ ದೃಶ್ಯ ಸಾಮಾನ್ಯವಾಗಿದ್ದು ಪಂಚಾಯತ್ ಆಡಳಿತ ಮತ್ತು ಆರೋಗ್ಯ ಇಲಾಖೆ ಮೌನ ವಹಿಸಿದೆ.
ಗುತ್ತಿಗಾರು ಪರಿಸರ ಹಲವು ಬಾರಿ ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳ ಹಾಟ್ ಸ್ಪಾಟ್ ಆಗಿದೆ. ಈಗಾಗಲೇ ಮಳೆ- ಬಿಸಿಲಿನ ಕಾರಣದಿಂದ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದ್ದು, ರೋಗ ಹರಡಲು ಕಾರಣವಾಗುವ ಲಕ್ಷಣಗಳು ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಗುತ್ತಿಗಾರು ಪಂಚಾಯತ್ ಆಡಳಿತ ಚರಂಡಿ ನೀರು ಸರಾಗವಾಗಿ ಹರಿದುಹೋಗಲು ಕ್ರಮ ಕೈಗೊಳ್ಳಬೇಕಿದೆ.
- Thursday
- November 21st, 2024