
ಹನ್ನೊಂದು ವರ್ಷದ ಬಾಲಕನೊಬ್ಬ ಮೂರು ವರ್ಷಗಳಿಂದ ಬೆಳೆಸಿದ ತನ್ನ ತಲೆಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ. ಕಾಸರಗೋಡು ಹಾಗೂ ಸುಳ್ಯತಾಲೂಕಿನ ಗಡಿಭಾಗ ಅಡೂರು ಗ್ರಾಮದ ಮಣಿಯೂರಿನ ನವೀನ್ ರಾವ್ ಸಿಂಧ್ಯಾ ಹಾಗೂ ಭವಾನಿ ದಂಪತಿಯ 11 ವರ್ಷ ಪ್ರಾಯದ ಪುತ್ರ ರತೀಶ್ ಸಿ. ಕೇಶದಾನ ಮಾಡಿರುವ ಬಾಲಕ. ಈತ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಕಲಿಯುತ್ತಿದ್ದಾಗಲೇ ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಬೇಕೆನ್ನುವ ಸಂಕಲ್ಪ ಕೈಗೊಂಡಿದ್ದನು. ಆಗ ಈತನಿಗೆ 8 ವರ್ಷ ಪ್ರಾಯವಿತ್ತು. ಹೆತ್ತವರು ಮಗನ ಇಚ್ಛೆಗೆ ಒಪ್ಪಿಗೆ ಕೊಟ್ಟಿದ್ದರು.ಮೂರು ವರ್ಷಗಳ ಕಾಲ ಬೆಳೆಸಿದ ಕೂದಲನ್ನು ಆತ ಇದೀಗ ಕತ್ತರಿಸಿ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಉದಯಭಾಸ್ಕರ್ ಅವರ ಮೂಲಕ ಕ್ಯಾನ್ಸರ್ ಪೀಡಿತರಿಗೆ ಹಸ್ತಾಂತರಿಸಿದ್ದಾನೆ. ರತೀಶ್ ಪ್ರಸ್ತುತ ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಗಜಾನನ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.