ಕೋವಿಡ್ ನ ತುರ್ತು ಸಂದರ್ಭದಲ್ಲಿ ಕೂಡ ಕೇವಲ ಟೀಕೆ ಮಾಡುವುದನ್ನೇ ಉದ್ಯೋಗ ಮಾಡಿಕೊಳ್ಳುವ ಬದಲು ರಾಜಕೀಯ ಬಿಟ್ಟು ಜನಗಳ ಕಷ್ಟಗಳಿಗೆ ನೆರವಾಗಿ ಎಂದು ಸುಳ್ಯದ ಕಾಂಗ್ರೆಸ್ ನಾಯಕರಿಗೆ ಮಂಡಲ ಬಿಜೆಪಿ ತಿರುಗೇಟು ನೀಡಿದೆ
ದೇಶದ ಎಲ್ಲ ಕಡೆಯೂ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ತನ್ನ ವಿಪರೀತವಾದ ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮವನ್ನು ಈಗ ಅನುಭವಿಸುತ್ತಿದೆ.
ಮೂರು ದಶಕಗಳ ಹಿಂದೆ ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಮೌನವಾಗಿ ಸಮರ್ಥಿಸಿದ ಕಾಂಗ್ರೆಸ್ ಇದೀಗ ಪಶ್ಚಿಮ ಬಂಗಾಳದಲ್ಲಿನ ದೌರ್ಜನ್ಯವನ್ನು ಕೂಡ ನೋಡಿ ಕಣ್ಮುಚ್ಚಿ ಕುಳಿತಿದೆ. ಈ ದೇಶದ ಸಮಗ್ರತೆಯನ್ನು ಎತ್ತಿಹಿಡಿಯುವ ಕಾರಣಕ್ಕಾಗಿ ಮತ್ತು ಪ್ರಜಾತಂತ್ರದ ಉಳಿಕೆಗಾಗಿ ಪಶ್ಚಿಮಬಂಗಾಳದ ದೌರ್ಜನ್ಯವನ್ನು ಖಂಡಿಸಿ ಬಿಜೆಪಿ ದೇಶದಾದ್ಯಂತ ಸಾಂಕೇತಿಕ ಪ್ರತಿಭಟನೆಯನ್ನು ಮಾಡಿದೆ. ಪಶ್ಚಿಮಬಂಗಾಳದಲ್ಲಿ ಇಷ್ಟೊಂದು ರಾಜಕೀಯ ಹಿಂಸಾಚಾರ ನಡೆದಿದ್ದರೂ ಕಾಂಗ್ರೆಸ್ಸಿಗರ ದಿವ್ಯ ಮೌನವು ಅವರ ರಾಜಕೀಯ ದಿವಾಳಿತನವನ್ನು ಎತ್ತಿತೋರಿಸುತ್ತದೆ.
ಭಾರತೀಯ ಜನತಾ ಪಾರ್ಟಿಯು ಒಂದು ನೈಜ ರಾಜಕೀಯ ಸಂಘಟನೆಯಾಗಿ ಜನರ ಪರವಾಗಿ ದನಿ ಎತ್ತುವ ಕೆಲಸವನ್ನು ಮಾಡುತ್ತಿದೆ. ಅದರ ಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಸುಳ್ಯದಲ್ಲಿ ಸಚಿವರ ನೇತೃತ್ವದಲ್ಲಿ ವಾರ್ ರೂಮ್ ರಚಿಸಿ ಜನಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕೆಲಸವನ್ನು ಕಳೆದ 15ದಿನಗಳಿಂದಲೂ ಮಾಡುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ, ಔಷಧಿ ಪೂರೈಕೆ, ಅಂತ್ಯ ಸಂಸ್ಕಾರಕ್ಕೆ ನೆರವು, ಈ ರೀತಿ ನಿರಂತರ ಜನಸೇವೆ ಯಲ್ಲಿ ಜನಪ್ರತಿನಿದಿಗಳು ಹಾಗೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.
ಈಗ ಲಾಕ್ ಡೌನ್ ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರು ಕೆಲವು ದಿನಗಳ ಹಿಂದೆ ಲಾಕ್ ಡೌನ್ ಮಾಡದಿರುವ ಕುರಿತು ಟೀಕಿಸಿದ್ದರು. ಅಧಿಕಾರ ಇಲ್ಲದೇ ಹಪಹಪಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಟೀಕೆ ಮಾಡುವುದೇ ಹವ್ಯಾಸವಾಗಿದೆ.
ದೇಶದ ಈ ಕಷ್ಟಕಾಲದಲ್ಲಿಯೂ ಜನರಿಗೆ ಈ ಬಾರಿಯೂ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿಯನ್ನು ನೀಡುವ ಕೆಲಸ ಕೇಂದ್ರ ಸರಕಾರ ಮಾಡಿದೆ. ಹಿಂದಿನ ಲಾಕ್ ಡೌನ್ ಮಾಡುವ ಸಮಯದಲ್ಲೂ ಅನೇಕ ರೀತಿಯಲ್ಲಿ ಬಡಜನರಿಗೆ ನೆರವಾಗುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿವೆ.
ಕೇವಲ ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ಸಿಗರು ಜನರ ಕಷ್ಟಗಳಿಗೆ ಸ್ಪಂದಿಸುವ ಯಾವ ಕೆಲಸವನ್ನು ಮಾಡಿದ್ದಾರೆ ಎಂದು ಅವರ ಎದೆ ಮುಟ್ಟಿ ಹೇಳಲಿ. ಓಟ್ ಬಂದಾಗ ಮಾತ್ರ ಜನರ ನೆನಪಾಗುವ ಕಾಂಗ್ರೆಸ್ಸಿಗರ ಬುದ್ಧಿ ಜನಗಳಿಗೂ ತಿಳಿದಿದೆ. ಕೋವಿಡ್ ನ ಈ ಸಂದರ್ಭದಲ್ಲಿ ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಬದಲು ಜನರ ಕಷ್ಟಗಳಿಗೆ ನೆರವಾಗುವ ಕೆಲಸವನ್ನು ಮಾಡಲಿ ಎಂದು ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
- Saturday
- November 23rd, 2024