ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್ ಮರವೊಂದು ವಿಶಾಲವಾಗಿ ಹಬ್ಬಿದ್ದು, ಇದರ ರೆಂಬೆಗಳು ಎಲೆಗಳಿಂದ ತುಂಬಿ ಜೋತಾಡುತ್ತ ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ. ಇದರ ಸಮೀಪದಲ್ಲಿ ವಿದ್ಯುತ್ ತಂತಿಗಳು ಹಾಗೂ ವಿದ್ಯುತ್ ಟ್ರಾನ್ಸ್‌ಫಾರಮ್ ಇದ್ದು ಗಾಳಿ ಬೀಸುವ ಸಂದರ್ಭ ರೆಂಬೆಗಳು ವಿದ್ಯುತ್ ತಂತಿಗೆ ಸ್ಪರ್ಶಿಸಿ ಭಯದ ವಾತಾವರಣವನ್ನು ಉಂಟುಮಾಡುತ್ತಿದೆ. ಇದೇ ಪರಿಸರದಲ್ಲಿ ನೂರಾರು ವಾಹನಗಳು ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ಗ್ರಾಮಗಳಿಗೆ ಪ್ರಯಾಣಿಸುವ ಪ್ರಯಾಣಿಕರನ್ನು ಕೊಂಡೊಯ್ಯಲು ಸರದಿ ಸಾಲಿನಲ್ಲಿ ನಿಂತಿರುತ್ತದೆ.
ಅದೇ ರೀತಿ ಅಟೋ ನಿಲ್ದಾಣ ಕೂಡಾ ಪಕ್ಕದಲ್ಲಿ ಇದ್ದು ನೂರಾರು ಜನರು ಈ ಪರಿಸರದಲ್ಲಿ ಓಡಾಡುತ್ತಿರುತ್ತಾರೆ. ಇವೆಲ್ಲವನ್ನು ಗಮನಿಸಿ ಸ್ಥಳೀಯ ವ್ಯಾಪಾಸ್ಥರು ವಾಹನ ಚಾಲಕ -ಮಾಲಕರು ಎರಡು ಮೂರು ಬಾರಿ ಸಂಬಂಧಪಟ್ಟವರಿಗೆ ಮನವಿಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲವೆಂದು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಮರದ ಬಾಗಿರುವ ಅಪಾಯದ ಸ್ಥಿತಿಯಲ್ಲಿರುವ ರೆಂಬೆಗಳನ್ನು ತೆರವುಗೊಳಿಸಿ ಮುಂದೆ ಉಂಟಾಗುವ ಬಾರಿ ಅನಾಹುತವನ್ನು ತಪ್ಪಿಸಬೇಕು ಎಂದು ಸ್ಥಳೀಯರ ಮನವಿಯಾಗಿದೆ.