ಗೋ ರಕ್ಷಕರಿಗೆ ಮತ್ತು ಗೋಹತ್ಯೆಯನ್ನು ವಿರೋಧಿಸುತ್ತಾ ಬಂದ ವಿವಿಧ ಹಿಂದೂ ವೇದಿಕೆಗಳಿಗೆ ತಾವು ಇಷ್ಟು ದಿನ ಮಾಡಿದ ಹೋರಾಟ ಸಾರ್ಥಕವಾಗುವ ಕ್ಷಣ ಸನ್ನಿಹಿತವಾಗಿದೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲೇ ಗುಜರಾತ್ ಮಾದರಿಯಲ್ಲಿ ಪ್ರಬಲವಾದ ಹೊಸ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೂಪಿಸಿದ್ದ ಜಾನುವಾರು ಹತ್ಯೆ ನಿಷೇಧ ಹಾಗೂ ಪ್ರತಿಬಂಧಕ ಕಾಯ್ದೆಗೆ ಅಂದಿನ ರಾಜ್ಯಪಾಲರು ಒಪ್ಪಿಗೆ ನೀಡದೆ ರಾಷ್ಟ್ರಪತಿಗೆ ರವಾನಿಸಿದ್ದರು. ಕೇಂದ್ರ ಗೃಹ ಸಚಿವಾಲಯ ಕೂಡಾ ಕೆಲವೊಂದು ಆಕ್ಷೇಪಣೆ ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು, ಇದಾದ ನಂತರ ಕಾಂಗ್ರೆಸ್ ಸರ್ಕಾರ 1964 ರ ಕಾಯ್ದೆಯನ್ನೇ ಮುಂದುವರೆಸುವ ನಿರ್ಧಾರ ಮಾಡಿತ್ತು.
‘ಗೋಹತ್ಯೆ ನಿಷೇಧ ಕಾಯಿದೆಯನ್ನು ಬಲಯುತವಾಗಿ ತರುವುದು ನಮ್ಮ ಉದ್ದೇಶ, ಲಾಕ್ ಡೌನ್ ಸಂಪೂರ್ಣ ಮುಗಿದ ಬಳಿಕ ಗುಜರಾತ್ ಗೆ ಹೋಗಿ ಅಧ್ಯಯನ ಮಾಡಿ ಬರುತ್ತೇನೆ. ನಂತರ ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಿ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಚಾಹ್ವಾನ್ ಅವರು ತಿಳಿಸಿದ್ದಾರೆ.